ನಿರುಕ್ತ -
ವೇದದಲ್ಲಿ ಬರುವ ಕಠಿಣ ಶಬ್ದಗಳಿಗೆ ವಿವರಣೆ ಕೊಡುವ ಅಮೂಲ್ಯ ಗ್ರಂಥ. ಅದನ್ನು ವೇದಾಂಗಗಳಲ್ಲಿ ಒಂದೆಂದು ಹೇಳಲಾಗಿದೆ. ಈಗ ಉಪಲಬ್ಧವಿರುವ ನಿರುಕ್ತದ ಕರ್ತೃ ಯಾಸ್ಕ (ಕ್ರಿ.ಪೂ. 8ನೆಯ ಶತಮಾನ) `ವೇದಾಧ್ಯಯನ ಮಾಡಿಯೂ ಆ ವೇದದ ಅರ್ಥವನ್ನರಿಯದವನು ಕೇವಲ ಕಂಬದಂತೆ ವೇದದ ಭಾರವನ್ನು ಹೊರುವವನಾಗುತ್ತಾನೆ. ಆದರೆ ವೇದಾರ್ಥಗಳನ್ನರಿತವನು ತನ್ನ ಜ್ಞಾನದಿಂದ ಪಾಪವನ್ನು ಕಳೆದುಕೊಳ್ಳುತ್ತಾನೆ. ಕಟಿಗೆ ಎಷ್ಟೇ ಒಣಗಿದ್ದರೂ ಅಗ್ನಿಯನ್ನು ಸೇರದಿದ್ದರೆ ಪ್ರಜ್ವಲಿಸುವುದಿಲ್ಲ. ಹಾಗೆಯೇ ಅರ್ಥ ಮಾಡಿಕೊಳ್ಳದೆ ಹೋದರೆ ಕಲಿತ ಶಬ್ದ ಪ್ರಕಾಶವನ್ನು ನೀಡುವುದಿಲ್ಲ.' ಯಾಸ್ಕರು ಹೇಳುವ ಈ ಮಾತುಗಳು ಅವರ ಮನೋಭಾವವನ್ನು ತೋರಿಸುತ್ತವೆ. ವೇದದ ಅರ್ಥನಿರ್ಣಯಕ್ಕೆ ಮೀಸಲಾಗಿರುವ ನಿರುಕ್ತ ವೇದಾಂತಗಳೆಲ್ಲ ಪ್ರಧಾನವಾದ ಸ್ಥಾನವನ್ನು ಹೊಂದಿದೆ. ಯಾಸ್ಕರೇ ತಮ್ಮ ನಿರುಕ್ತದಲ್ಲಿ (1-15) ನಿರುಕ್ತ ಮತ್ತು ನಿರ್ವಚನಕ್ರಮದ ಪರಿಚಯವಿಲ್ಲದೆ ಹೋದರೆ ವೇದಾರ್ಥವನ್ನರಿಯುವುದು ಅಸಾಧ್ಯವೆಂದು ಹೇಳಿದ್ದಾರೆ.

    ಯಾಸ್ಕರಿಗೆ ಹಿಂದೆ ಅನೇಕ ನಿರುಕ್ತಕಾರರಿದ್ದರೆಂಬುದನ್ನು ಅವರ ಉಲ್ಲೇಖಗಳಿಂದಲೇ ನಾವು ಅರಿಯಬಹುದು. ನಿರುಕ್ತ ಹದಿನಾಲ್ಕು ಪ್ರಭೇದಗಳಲ್ಲಿತ್ತೆಂದು ದುರ್ಗಭಾಷ್ಯದಲ್ಲಿ ಸ್ಪಷ್ಟವಾಗಿ ಹೇಳಿದೆ. ಯಾಸ್ಕರು ತಮ್ಮ ನಿರುಕ್ತದಲ್ಲಿ ಅಗ್ರಯಣ, ಔದುಂಬರಾಯಣ, ಔಪಮನ್ಯವ, ಔರ್ಣವಾಭ, ಕಾಥಕ್ಯ, ಕೌತ್ಸ, ಗಾಗ್ರ್ಯ, ಗಾಲಮ, ಧರ್ಮಶಿರಸ್, ವಾಷ್ರ್ಯಾಯಣಿ, ಶತವಲಾಕ್ಷ ಮೌದ್ಗಲ್ಯ, ಶಾಕಟಾಯನ, ಶಾಕಪೂಣಿ, ಸ್ಥೌಲಾಷ್ಠೀವೀ ಮುಂತಾದ ಪ್ರಾಚೀನ ನೈರುಕ್ತರನ್ನು ಹೆಸರಿಸಿದ್ದಾರೆ. ಇವರ ಅಭಿಪ್ರಾಯಗಳನ್ನು ಅಲ್ಲಲ್ಲಿ ಉಲ್ಲೇಖಿಸಿದ್ದಾರೆ. ಇದೆಲ್ಲದರಿಂದ ಯಾಸ್ಕರು ತಮ್ಮ ಹಿಂದಿನವರ ಪರಿಶ್ರಮದ ಪ್ರಯೋಜನವನ್ನು ಪಡೆದು ಈ ಗ್ರಂಥವನ್ನು ನಿರ್ಮಾಣ ಮಾಡಿದ್ದಾರೆಂಬುದು ಗೊತ್ತಾಗುವುದು.

    ಯಾಸ್ಕರ ನಿರುಕ್ತಕ್ಕೆ ಬ್ರಾಹ್ಮಣ ಗ್ರಂಥಗಳು ಒಂದು ದೃಷ್ಟಿಯಲ್ಲಿ ಪರಮಾಧಾರಗಳೆಂದು ಹೇಳಬಹುದು. ವೇದದಲ್ಲಿಯೇ ವೇದಾಂಗಗಳ ಅಂಶಗಳು ಬೀಜರೂಪವಾಗಿವೆ. ಬ್ರಾಹ್ಮಣ ಗ್ರಂಥಗಳಲ್ಲಿ ಅನೇಕ ಕಡೆ ಶಬ್ದನಿರ್ವಚನ ಹಾಗೂ ಅರ್ಥ ನಿರ್ವಚನ ಮಾಡಿದೆ. ಯಾಸ್ಕರೂ ತಮ್ಮ ನಿರ್ವಚನವನ್ನು ಸಮರ್ಥಿಸುವುದಕ್ಕಾಗಿ ಅನೇಕವಾಗಿ ಬ್ರಾಹ್ಮಣ ಗ್ರಂಥಗಳ ಅಭಿಪ್ರಾಯವನ್ನು ಉದಾಹರಿಸಿದ್ದಾರೆ. ಇಂಥ ಉಲ್ಲೇಖಗಳನ್ನು ಪ್ರೊಫೆಸರ್ ಗುಣೇ ಅವರು ಸಂಗ್ರಹಿಸಿ ಕೊಟ್ಟಿದ್ದಾರೆ.

    ಯಾಸ್ಕರು ಪಾಣಿನಿಗಿಂತ ಪ್ರಾಚೀನರೆಂದು ಬಹುಮಂದಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಪಾಣಿನಿ ಯಾಸ್ಕದಿಭ್ಯೋ ಗೋತ್ರೇ ಎಂಬ ಸೂತ್ರದಲ್ಲಿ ಯಾಸ್ಕರ ಉಲ್ಲೇಖ ಮಾಡಿದ್ದಾರೆಂದು ಕಂಡುಬರುತ್ತದೆ. ಪ್ರೊ. ಗೋಲ್ಡ್‍ಸ್ಮಕ್ ಪಾಣಿನಿಗೆ ಯಾಸ್ಕರ ಹೆಸರು ಗೊತ್ತಿತ್ತೆಂದು ಹೇಳಿದರೂ ಈ ಸೂತ್ರದ ಆಧಾರದಿಂದಲೇ ನಿರುಕ್ತಕಾರ ಯಾಸ್ಕರ ಉಲ್ಲೇಖವಿದೆಯೆಂದು ಹೇಳುವುದಕ್ಕಾಗುವುದಿಲ್ಲವೆಂದು ಅಭಿಪ್ರಾಯ ಪಡುತ್ತಾರೆ. ನಿರುಕ್ತಕಾರ ಯಾಸ್ಕರೇ ಆ ಕುಲದ ಮೂಲಪುರಷರೆನ್ನಲು ಸಂಶಯವಿದೆಯೆಂಬುದು ಅವರ ಅಭಿಪ್ರಾಯ. ನಿರುಕ್ತದ ಕೊನೆಯಲ್ಲಿ ನಮೋ ಯಾಸ್ಕಾಯ ಎಂಬ ಉಲ್ಲೇಖವಿದೆ. ಇದರಿಂದ ನಿರುಕ್ತವೂ ನಿಘಂಟೂ  ಬೇರೆ ಬೇರೆ ಯಾಸ್ಕರುಗಳಿಂದ ನಿರ್ಮಾಣ ಮಾಡಲ್ಪಟ್ಟವೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಯಾಸ್ಕರು ಉಪಧಾ ಅಭ್ಯಾಸ ಗುಣ ಮುಂತಾದ ಸಂಜ್ಞೆಗಳನ್ನು ಬಳಸಿರುವುದರಿಂದ ಪಾಣಿನಿಗಳಿಗಿಂತ ಅರ್ವಾಚೀನರೆಂಬ ವಾದವೂ ಬಂದಿದೆ. ಇವುಗಳನ್ನೆಲ್ಲ ಜಾಣ್ಮೆಯಿಂದ ಪರೀಕ್ಷಿಸಿದ ವಿದ್ವಾಂಸರು, ಯಾಸ್ಕರು ಪಾಣಿನಿಗಳಿಗಿಂತ ಪ್ರಾಚೀನರೆಂದೂ ಸುಮಾರು ಕ್ರಿ.ಪೂ. ಎಂಟನೆಯ ಶತಮಾನದಲ್ಲಿದ್ದರೆಂದೂ ನಿರ್ಣಯಿಸಿದ್ದಾರೆ.

  ಋಗ್ವೇದ ಸಂಹಿತೆಯ ಪರ ಪಾಠಕಾರರಾದ ಶಾಕಲ್ಯರು ಯಾಸ್ಕರಿಗಿಂತ ಪ್ರಾಚೀನರು. ಸಿರುಕ್ತದಲ್ಲಿ (6-28) ಯಾಸ್ಕರು ಶಾಕಲ್ಯರ ಹೆಸರನ್ನು ಹೇಳಿದ್ದಾರೆ. ಅನೇಕ ಕಡೆ ಶಾಕಲ್ಯರ ಪದಪಾಠವನ್ನು ಯಾಸ್ಕರು ಅನುಸರಿಸಿಲ್ಲ. ವಾಯೇ ಎಂಬುದನ್ನು ವಾ ಮತ್ತು ಯ ಎಂದು ಶಾಕಲ್ಯರು ಮಾಡಿದ ವಿಭಾಗ ಸರಿಯಿಲ್ಲವೆಂದು ಯಾಸ್ಕರು ಆಕ್ಷೇಪಿಸುತ್ತಾರೆ. ಮಾಸಕೃತ್ ಎಂಬುದನ್ನೇ ಶಾಕಲ್ಯರು ಮಾ ಮತ್ತು ಸಕೃತ್ ಎಂದು ವಿಭಾಗಿಸಿದರೆ, ಯಾಸ್ಕರು ಮಾಸ ಕೃತ್ ಎಂದು ವಿಭಾಗ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇವರಲ್ಲಿ ಹೀಗೆ ಭಿನ್ನಾಭಿಪ್ರಾಯ ಕಂಡುಬರುತ್ತದೆ. ಯಾಸ್ಕರು ಅನಂತರ ಇದ್ದ ಶೌನಕರು ತಮ್ಮ ಬೃಹದ್ದೇವತೆಯಲ್ಲಿ ನಿರುಕ್ತಕಾರ ಯಾಸ್ಕರ ಅಭಿಪ್ರಾಯವನ್ನು ಉಲ್ಲೇಖಿಸಿ ಅಲ್ಲಲ್ಲಿ ಟೀಕಿಸಿದ್ದಾರೆ. ಪುರುಷಾದಃ ಎಂಬುದನ್ನು ಪುರುಷಾನ್ ಮತ್ತು ಅದನಾಯ ಎಂದು ಯಾಸ್ಕರು ವಿಭಾಗಿಸಿರುವುದನ್ನು ಶೌನಕರು ಆಕ್ಷೇಪಿಸುತ್ತಾರೆ. ವಾಯೋ ಎಂಬಲ್ಲಿ ಶಾಕಲ್ಯರ ಪದವಿಭಾಗವನ್ನು ಬೃಹದ್ದೇವತೆಯಲ್ಲಿ ಸಮರ್ಥಿಸಲಾಗಿದೆ. ಇದರಿಂದ ಈ ಆಚಾರ್ಯರುಗಳಲ್ಲಿ ಇವುಗಳ ಬಗೆಗೆ ಭಿನ್ನಾಭಿಪ್ರಾಯಗಳಿದ್ದವೆಂಬುದು ಗೊತ್ತಾಗುತ್ತದೆ. 

   ಯಾಸ್ಕರ ನಿರುಕ್ತ ಸಂಗ್ರಹವಾದ ಮತ್ತು ವಿಸ್ತಾರವಾದ ಎರಡು ರೂಪಗಳಲ್ಲಿ ರಚಿಸಲ್ಪಟ್ಟಿರಬೇಕೆಂದು ಪ್ರೋಫೆಸರ್ ಸ್ಕೋಲ್ಡ್ ಅಭಿಪ್ರಾಯಪಡುತ್ತಾರೆ. ಬೃಹದ್ದೇವತೆ ಮತ್ತು ನಿರುಕ್ತದ ನಿಪುಣ ಪರೀಕ್ಷಣದಿಂದ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ. ಬೃಹದ್ದೇವತೆಯಲ್ಲಿಯೂ ವಾರರುಚ ನಿರುಕ್ತ ಸಮುಚ್ಚಯದಲ್ಲಿಯೂ ನಿರುಕ್ತಕಾರರ ಅಭಿಪ್ರಾಯವೆಂದು ಉಲ್ಲೇಖಿಸಿರುವ ಅಂಶ ಈಗ ಉಪಲಬ್ಧವಾಗಿರುವ ನಿರುಕ್ತದಲ್ಲಿಲ್ಲದಿರುವುದು ಗಮನಾರ್ಹವಾಗಿದೆ. ಬೃಹದ್ದೇವತೆಯಲ್ಲಿ ನಿರುಕ್ತದ ಬೃಹತ್ಪಾಠವನ್ನು ಅನುಸರಿಸಿರುವುದನ್ನು ನಾವು ಕಾಣಬಹುದು. ಬೃಹದ್ದೇವತೆಯಲ್ಲಿ ಯಾಸ್ಕರ ನಾಮ ನಿರ್ದೇಶಪೂರ್ವಕವಾಗಿ ಹೇಳಿರುವ ಅಭಿಪ್ರಾಯಗಳು ಈಗ ನಮಗೆ ದೊರಕಿರುವ ನಿರುಕ್ತದಲ್ಲಿಲ್ಲ. ಇವು ಪ್ರಾರ್ಯ ನಿರುಕ್ತದ ಬೃಹತ್ಪಾಠಕ್ಕೆ ಅನ್ವಯಿಸಿರಬಹುದೆಂದು ಪ್ರೊ. ಸ್ಕೋಲ್ಡ್ ಊಹಿಸುತ್ತಾರೆ. ಅಥವಾ ಈ ಅಭಿಪ್ರಾಯಗಳು ಇತರ ನಿರುಕ್ತಗಳಿಂದ ತೆಗೆದುಕೊಳ್ಳಲ್ಪಟ್ಟಿದ್ದರೂ ಇರಬಹುದು. ಇವೆಲ್ಲದರಿಂದ ಅನೇಕ ಅಂಶಗಳಲ್ಲಿ ಯಾಸ್ಕರಿಗೂ ಬೃಹದ್ದೇವತಾಕಾರರಿಗೂ ಅಭಿಪ್ರಾಯಭೇದವಿತ್ತೆಂಬುದು ಗೊತ್ತಾಗುತ್ತದೆ.

    ನಿಘಂಟು ಮತ್ತು ನಿರುಕ್ತವನ್ನು ಬರೆದವರು ಒಬ್ಬರೇ ಎಂದು ಪ್ರೊಫೆಸರ್ ಭಗವದ್ದತ್ತರ ಅಭಿಪ್ರಾಯವಾಗಿದೆ. ಆದರೆ ಡಾ. ಸಿದ್ಧೇಶ್ವರ ವರ್ಮರು ನಿಘಂಟಿನ ಕರ್ತೃ ಕಾಶ್ಶಪರೆಂದೂ ನಿರುಕ್ತ ಯಾಸ್ಕರದೆಂದೂ ಮಹಾಭಾರತದ ಆಧಾರದ ಮೇಲೆ ನಿರ್ಣಯಿಸಿದ್ದಾರೆ. ನಿಘಂಟೂ ಏಕಕರ್ತೃಕವಲ್ಲವೆಂದೂ ಅನೇಕ ಕರ್ತೃಕವೆಂದೂ ಪ್ರೊ. ಕರಮರಕರರು ಅಭಿಪ್ರಾಯ ಪಡುತ್ತಾರೆ. ಮೊದಲ ಮೂರು ಅಧ್ಯಾಯಗಳನ್ನು ಬರೆದವರೂ ನಾಲ್ಕನೆಯ ಅಧ್ಯಾಯವನ್ನು ಸಂಗ್ರಹಿಸಿದವರೂ ಬೇರೆ ಬೇರೆಯವರೆಂದು ಇವರ ಅಭಿಪ್ರಾಯ. ಮೊದಲ ಭಾಗದಲ್ಲಿ ಆರಿಸಿರುವ ಶಬ್ದಗಳನ್ನೇ ಮುಂದಿನ ಭಾಗದಲ್ಲಿಯೂ ಆರಿಸಿರುವುದು ಇದಕ್ಕೆ ನಿದರ್ಶನವೆಂದು ಇವರು ಹೇಳುತ್ತಾರೆ. ದುರ್ಗಭಾಷ್ಯ ನಿಘಂಟು ಒಬ್ಬರದೇ ಎಂಬ ವಿಚಾರದಲ್ಲಿ ಸಂದೇಹವಿಲ್ಲ. ಪ್ರೊ. ಸ್ಕೋಲ್ಡರ ಅಭಿಪ್ರಾಯದಂತೆ ನಿಘಂಟು ಎಂಬ ಶಬ್ದ ಸಮಾನಾರ್ಥಕ ಶಬ್ಧಗಳನ್ನೊಳಗೊಂಡ ಮೊದಲ ಅಧ್ಯಾಯಕ್ಕಿತ್ತೆಂದೂ ಕಾಲಕಳೆದಂತೆ ಇತರ ಅಧ್ಯಾಯಗಳಿಗೂ ಅದೇ ಹೆಸರು ಅನ್ವಯಿಸಿತೆಂದೂ ತಿಳಿಯುತ್ತೇವೆ. ಪ್ರೊ. ವಿಷ್ಣುಪಾಧ ಭಟ್ಟಾಚಾರ್ಯರ ಅಭಿಪ್ರಾಯದಂತೆ ಉಪಲಬ್ಧವಾಗಿರುವ ನಿಘಂಟು ಯಾಸ್ಕರಿಂದಲೇ ಸಂಗೃಹೀತವಾದುದು, ಇದಕ್ಕೂ ಹಿಂದೆ ಅನೇಕ ನಿಘಂಟುಗಳಿದ್ದವು, ಯಾಸ್ಕರು ಅವುಗಳಿಂದ ಶಬ್ಧಗಳನ್ನು ತೆಗೆದುಕೊಂಡಿದ್ದಾರೆ, ಯಾಸ್ಕರಿಗಿಂತ ಹಿಂದಿನ ನಿಘಂಟುಗಳಲ್ಲಿಯೂ ನೈಘಂಟಿಕ, ಏಕಪದಿಕ ಮತ್ತು ದೈವತ ಎಂದು ಮೂರು ಕಾಂಡಗಳಿದ್ದವು-ಎಂದು. ಹೀಗೆ ವಿದ್ವಾಂಸರು ನಿಘಂಟು ಮತ್ತು ನಿರುಕ್ತದ ಬಗೆಗೆ ವಿವೇಚಿಸಿದ್ದಾರೆ.

    ನಿಘಂಟು ಐದು ಅಧ್ಯಾಯಗಳಲ್ಲಿ ಮೂರು ಕಾಂಡಗಳಲ್ಲಿ ಇದೆ. ಮೊದಲ ಮೂರು ಅಧ್ಯಾಯಗಳಿಗೆ ನೈಘಂಟುಕ ಕಾಂಡವೆಂದೂ ನಾಲ್ಕನೆಯ ಅಧ್ಯಾಯಕ್ಕೆ ನೈಗಮಕಾಂಡವೆಂದೂ ಐದನೆಯ ಅಧ್ಯಾಯಕ್ಕೆ ದೇವತಾಕಾಂಡವೆಂದೂ ಹೆಸರಿದೆ. ನೈಘಂಟುಕ ಕಾಂಡದಲ್ಲಿ ಸಮಾನಾರ್ಥಕಗಳಾದ ಅನೇಕ ಶಬ್ದಗಳ 69 ಗಣಗಳಿವೆ; 1,280 ಪದಗಳಿವೆ. ನೈಗಮ ಕಾಂಡದಲ್ಲಿ 278 ಏಕಪದಿಕಗಳಿವೆ; ದೇವತಾ ಕಾಂಡದಲ್ಲಿ 151 ಪದಗಳಿವೆ. ನೈಘಂಟುಕ ಕಾಂಡದಲ್ಲಿನ ಗಣಗಳಲ್ಲಿ ಮುಖ್ಯವಾದ ಪದಗಳಿಗೂ ನೈಗಮ ಮತ್ತು ದೇವತಾ ಕಾಂಡದ ಒಂದೊಂದು ಪದಕ್ಕೂ ನಿರ್ವಚನ ಹೇಳಿ, ಮಂತ್ರಗಳಿಂದ ಉದಾಹರಿಸಿ ಅರ್ಥವಿವರಣೆ ಮಾಡಲಾಗಿದೆ.

    ವೈದಿಕ ನಿಘಂಟಿಗೆ ವಿವರಣೆ ಕೊಡುವುದರಲ್ಲಿಯೇ ಯಾಸ್ಕರು ತೃಪ್ತರಾಗಿಲ್ಲ. ಅವರು ಅನೇಕ ಮಹತ್ತ್ವದ ವಿಚಾರಗಳನ್ನು ತಮ್ಮ ಗ್ರಂಥದಲ್ಲಿ ವಿವೇಚಿಸಿದ್ದಾರೆ. ನಿಘಂಟಿನ ಶಬ್ದಗಳ ವ್ಯುತ್ಪತ್ತಿಯನ್ನು ತಿಳಿಸಿ ಆ ಪದ ಬರುವ ಮಂತ್ರವನ್ನು ಉದಾಹರಿಸಿ ಪ್ರಸಂಗವಶಾತ್ ಆ ಮಂತ್ರಗಳ ಅರ್ಥವನ್ನು ವಿವೇಚಿಸಿದ್ದಾರೆ. ನಿರುಕ್ತ ಹೀಗೆ ಮೊಟ್ಟಮೊದಲ ವೇದಭಾಷ್ಯವಾಗಿದೆ. ಇಲ್ಲಿ ಬರುವ ವ್ಯಾಕರಣಾಸ್ತ್ರಸಮೀಕ್ಷೆ ಪ್ರತಿ ಶಾಖ್ಯಕ್ಕೂ ಪಾಣಿನಿಯ ಕಾಲಕ್ಕೂ ನಡುವಣ ಕೊಂಡಿಯಂತಿದೆ. ವೇದ ವಾಙ್ಮಯದ ಸ್ವರೂಪದ ವಿಮರ್ಶೆಯೂ ಇಲ್ಲಿದೆ. ಹೀಗೆ ಬಹುಮುಖ ಪ್ರಾಧಾನ್ಯ ಈ ಗ್ರಂಥಕ್ಕಿದೆ.

    ನಿರುಕ್ತದಲ್ಲಿ ವಿವೇಚಿಸಿರುವ ವಿಚಾರಗಳು ಹೀಗಿವೆ: ನಾಮಪದ, ಕ್ರಿಯಾಪದ, ಉಪಸರ್ಗನಿಪಾತಗಳು, ಷಡ್ಭಾವ ವಿಕಾರಗಲೂ, ನಾಮಪದಗಳು ಧಾತುಜಗಳೆಂಬ ನಿರ್ಣಯ, ಮಂತ್ರಗಳ ಅರ್ಥವತ್ತ್ವ ಸ್ಥಾಪನೆ, ಮಂತ್ರದೇವತೆಯನ್ನರಿಯುವ ಬಗೆ, ಅರ್ಥಜ್ಞ ಪ್ರಶಂಸೆ, ನಿರ್ವಚನ ಕ್ರಮದ ಪ್ರತಿಪಾದನೆ, ಶಿಷ್ಯಲಕ್ಷಣ-ಮೊದಲಾದವು ಪೀಠಿಕಾರೂಪವಾಗಿ ಬಂದಿವೆ. ಅನಂತರ ನೈಘಂಟುಕ ಪ್ರಕರಣದ ಗಣಗಳಲ್ಲಿ ಮುಖ್ಯವಾದ ಶಬ್ದಗಳ ನಿರುಕ್ತಿಯೂ ತದನಂತರ ನೈಗಮಕಾಂಡದ ಏಕಪದಿಕಗಳ ವಿವರಣೆಯೂ ಇವೆ. ದೇವತಾಕಾಂಡಕ್ಕೆ ಪೀಠಿಕೆಯಾಗಿ ಮಂತ್ರಲಕ್ಷಣ, ಮಂತ್ರವಿಭಾಗ, ಮಂತ್ರ ದರ್ಶನಪ್ರಕರಣ ವಿವರಣೆ, ದೇವತೆಗಳ ಶಕ್ತಿಮತ್ತ್ವ ದೇವತೆಗಳ ಸ್ಥಾನತ್ರಯಭೇದ, ದೇವತೆಗಳ ಅನೇಕ ನಾಮಧೇಯ ಯೋಗ, ದೇವತೆಗಳ ಆಕಾರ ಚಿಂತನೆ ಮೊದಲಾದವುಗಳನ್ನು ವಿಮರ್ಶಿಸಿ ದೇವತೆಗಳ ನಾಮನಿರ್ವಚನವನ್ನೂ ಮಂತ್ರಾರ್ಥನಿರ್ವಚನ ವಿಚಾರವನ್ನೂ ನಡೆಸಲಾಗಿದೆ.

    ವೇದಮಂತ್ರಕ್ಕೆ ಅರ್ಥವುಂಟೆಂಬುದನ್ನು ಯಾಸ್ಕರು ಯುಕ್ತಿಯುಕ್ತವಾಗಿ ಸ್ಥಾಪಿಸಿದ್ದಾರೆ. ಆಚಾರ್ಯ ಪರಂಪರೆಯಿಂದ ಜ್ಞಾನಸಾಕ್ಷಾತ್ಕಾರಪಡೆದ ಬಹುಶ್ರುತರು ಮಂತ್ರಾರ್ಥವಿಜ್ಞಾನಶಾಲಿಗಳಾಗಬಹುದೆಂದು ಇವರ ಮತ. ನಿರ್ವಚನ ಕ್ರಮವನ್ನು ಕುರಿತು ಯಾಸ್ಕರು ಮಾಡಿರುವ ವಿವೇಚನೆ ಭಾಷಾಸಂಶೋಧಕರಿಗೆ ಅಪಾರವಾದ ಸಹಾಯವನ್ನುಂಟುಮಾಡುತ್ತದೆ. ವ್ಯವಹಾರದಲ್ಲಿ ಪ್ರಸಿದ್ಧವಾದ ಪ್ರಯೋಗಗಳನ್ನು ಗಮನಿಸಿ ವೈದಿಕ ಶಬ್ದ ನಿರ್ವಚನವನ್ನೂ ವೈದಿಕ ಪ್ರಯೋಗಗಳನ್ನರಿತು ಬ್ಯಾವಹಾರಿಕ ಭಾಷಾ ನಿರ್ವಚನವನ್ನೂ ಮಾಡಬೇಕೆಂಬ ಯಾಸ್ಕರ ಸೂಚನೆ ಬಹಳ ಅರ್ಥವತ್ತಾಗಿದೆ. ಯಾಸ್ಕರು ಶಬ್ದಪ್ರಪಂಚವನ್ನು ನಾಮ, ಕ್ರಿಯಾಪದ, ಉಪಸರ್ಗ ಮತ್ತು ನಿಪಾತ ಎಂದು ನಾಲ್ಕು ಬಗೆಯದಾಗಿ ವಿಂಗಡಿಸಿದ್ದಾರೆ. ಉಪಸರ್ಗಗಳೂ ಸ್ವತಂತ್ರವಾಗಿ ಅರ್ಥವನ್ನು ಕೊಡಬಲ್ಲವೆಂದು ಯಾಸ್ಕರ ಅಭಿಪ್ರಾಯ. ನಾಮಪದಗಳೆಲ್ಲ ಕ್ರಿಯಾಪದಗಳಿಂದಲೇ ಬಂದವೆಂಬ ನಿರ್ಣಯವನ್ನು ಯಾಸ್ಕರು ಸಮರ್ಥಿಸುತ್ತಾರೆ. ನಿರುಕ್ತಶಾಸ್ತ್ರ ಇವರ ಅಭಿಪ್ರಾಯದಂತೆ ತನ್ನ ಸ್ವತಂತ್ರತೆಯನ್ನೂ ಉಳಿಸಿಕೊಂಡು ವ್ಯಾಕರಣ ಶಾಸ್ತ್ರವನ್ನು ಪೂರ್ತಿಗೊಳಿಸುತ್ತದೆ.

    ಯಾಸ್ಕರು ಪ್ರಾಸಂಗಿಕವಾಗಿ ಅನೇಕಾನೇಕ ವಿಷಯಗಳನ್ನು ತಮ್ಮ ನಿರುಕ್ತದಲ್ಲಿ ತಿಳಿಸುವುದು ನಮ್ಮ ಆಸಕ್ತಿಯನ್ನು ಕೆರಳಿಸುತ್ತದೆ. ತಮ್ಮ ಕಾಲದ ಸಮಾಜನ ನಿಯಮಗಳ ವಿಚಾರ ಅಲ್ಲಲ್ಲಿ ಬರುತ್ತದೆ. ಸ್ತ್ರೀಯರಿಗೆ ಆಸ್ತಿಗೆ ಅಧಿಕಾರವುಂಟೇ ಇಲ್ಲವೇ ಎಂಬುದನ್ನೊಂದು ಕಡೆ ಚರ್ಚಿಸುವರು. ಪಂಚಜನಾಃ ಎಂಬ ಪದಕ್ಕೆ ಅರ್ಥ ಹೇಳುವಾಗ ನಾಲ್ಕು ವರ್ಣಗಳ ಜೊತೆಗೆ ನಿಷಾದವನ್ನು ಐದನೆಯವನನ್ನಾಗಿ ಇವರು ತಿಳಿಸುವುದು ಕುತೂಹಲಕರವಾಗಿದೆ. ಚಂದ್ರನಿಗೆ ಸ್ವಯಂಪ್ರಕಾಶತ್ಮವಿಲ್ಲವೆಂದೂ ಆದಿತ್ಯನ ರಶ್ಮಿಯೊಂದರ ಸಹಾಯದಿಂದ ಚಂದ್ರ ಕಾಂತಿಯುತನಾಗಿದ್ದಾನೆ ಎಂದೂ ನಿರೂಪಿಸುತ್ತ ಖಗೋಳಶಾಸ್ತ್ರದಲ್ಲಿ ಅಂದಿನ ಜನರ ತಿಳಿವಳಿಕೆಯನ್ನು ಹೊರಗೆಡಹಿದ್ದಾರೆ. ಉಪಮಾನಗಳ ವಿಚಾರವೂ ಅವುಗಳ ಭೇದಪ್ರಭೇದಗಳ ವಿಚಾರವೂ ಅಲ್ಲಿ ಚರ್ಚಿತವಾಗಿದೆ. ಇದರಿಂದ ಅಲಂಕಾರಶಾಸ್ತ್ರದ ಉದಯ ಆಗಲೇ ಆಗಿತ್ತೆಂದು ಗೊತ್ತಾಗುತ್ತದೆ. ನಿಘಂಟಿಗೆ ನಿರ್ವಚನ ಮಾಡುವಾಗ ಯಾಸ್ಕರು ಉಲ್ಲೇಖಿಸುವ ಉಪಾಖ್ಯಾನಗಳು ರೋಚಕವಾಗಿವೆ.

    ಯಾಸ್ಕರು ತಮ್ಮ ಗ್ರಂಥದಲ್ಲಿ ಮಾಡಿರುವ ದೇವತಾ ವಿಭಾಗ ಸಮಂಜಸವಾದುದೆಂದು ಅನೇಕ ಆಧುನಿಕ ವಿಮರ್ಶಕರೂ ಒಪ್ಪುತ್ತಾರೆ. ವೇದದಲ್ಲಿ ಪ್ರಸ್ತುತವಾಗಿರುವ ದೇವತಾನಾನಾತ್ವ ಮತ್ತು ದೇವತೈಕ್ಯಕ್ಕೆ ಸಮನ್ವಯ ಮಾಡುತ್ತ ಮಹಾಭಾಗ್ಯಾತ್ ದೇವತಾಯಾಃ ಏಕ ಆತ್ಮಾ ಬಹುಧಾಸ್ತೂಯತೇ ಎಂದು ನಿರೂಪಿಸಿರುವುದು ಅವರ ಋಷಿ ದೃಷ್ಟಿಗೆ ನಿದರ್ಶನವಾಗಿದೆ.

   ಇವುಗಳೆಲ್ಲದಕ್ಕೂ ಕಿರೀಟಪ್ರಾಯವಾಗಿದೆ, ಯಾಸ್ಕರ ಮಂತಾರ್ಥವಿಚಾರವಿವೇಚನೆ ಮಂತ್ರಗಳಿಗೆ ಅಧಿಯಜ್ಞಾರ್ಥ, ಅಧಿದೈವಾರ್ಥ ಮತ್ತು ಅಧ್ಯಾತ್ಮಾರ್ಥ ಎಂದು ಮೂರು ಬಗೆಯ ಅರ್ಥ ಸಂಪತ್ತಿದೆ. ಎಂಬುದು ಇವರ ನಿರ್ಣಯ. ಯಾಜ್ಞಕರಿಗೆ ಅಧಿಯಜ್ಞಾರ್ಥ ಮುಖ್ಯ. ನೈರುಕ್ತರಿಗೆ ಅಧಿದೈವಾರ್ಥವೇ ಪ್ರಧಾನ. ಆದರೆ, ಆತ್ಮವಿತ್ತುಗಳಿಗೆ ಅಧ್ಯಾತ್ಮಾರ್ಥವೇ ಶ್ರೇಷ್ಠ. ಇವು ಒಂದಕ್ಕೊಂದು ಪೋಷಕವಾಗಿವೆ. ತಮ್ಮ ತಮ್ಮ ಸಾಮಥ್ರ್ಯಕ್ಕನುಸಾರವಾಗಿ ಇದನ್ನು ಸಾಧಕರು ಸಾಧಿಸಬಹುದು. ನಾನಾತ್ವದಿಂದ ತ್ರಿತ್ತ್ವಕ್ಕೂ ತ್ರಿತ್ತ್ವದಿಂದ ಏಕತ್ವಕ್ಕೂ ಸೋಪಾನಕ್ರಮದಲ್ಲಿ ಮಂದುವರಿಯಬೇಕು. ಈ ಮೂರು ಬಗೆಯ ಅರ್ಥವನ್ನು ತಿಳಿದು ಪರಮಾರ್ಥವಾದ ಸರ್ವಾಂತರಾತ್ಮನಲ್ಲಿ ಇದರ ಪರಮನಿಷ್ಠೆಯನ್ನು ಕಾಣಬೇಕೆಂಬ ದ್ವನಿ ಇಲ್ಲಿದೆ. 

   ನಿರುಕ್ತದಲ್ಲಿ ಯಾಸ್ಕರ ಬಹುಮುಖವಾದ ಪ್ರತಿಭೆ ಮತ್ತು ಸಮನ್ವಯ ದೃಷ್ಟಿಯ ಪರಿಚಯವಾಗುತ್ತದೆ. ಅಪಾರವಾದ ವೇದ ವಾಙ್ಮಯದ ಸಮಗ್ರ ಜ್ಞಾನ, ನಾನಾ ದೃಷ್ಟಿಗಳಿಂದ ಅದರ ವಿಮರ್ಶೆ, ಪ್ರಾಸಂಗಿಕವಾದ ಇತಿಹಾಸ ಕಥನ, ಮಂತ್ರಗಳ ಗೂಢಾರ್ಥ ವಿವರಣೆ, ಸ್ವತಂತ್ರವಾದ ಆದರೂ ಸಮಂಜಸವಾದ ಸಮನ್ವಯ-ಇವು ಯಾಸ್ಕರ ವೈಶಿಷ್ಟ್ಯ. ವೇದವಾಙ್ಮಯದ ಅಧ್ಯಯನಕ್ಕೆ ಯಾಸ್ಕಾಚಾರ್ಯರಿಂದ ಆಗಿರುವ ಉಪಕಾರ ವರ್ಣನಾತೀತವಾಗಿದೆ.            
 (ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ